- ಪುಸ್ತಕದ ಹೆಸರು: ‘ಕವಿಜಿಹ್ವಾಬಂಧನ’
- ಲೇಖಕನ ಹೆಸರು: ಈಶ್ವರ ಕವಿ
- ಕಾಲ: ಸುಮಾರು ಕ್ರಿ.ಶ. 1300
- ವಸ್ತು: ಛಂದಸ್ಸು
-
ಪರಿಚಯ:
ಕವಿಜಿಹ್ವಾಬಂಧನವು ಛಂದಶ್ಶಾಸ್ತ್ರದ ಪುಸ್ತಕ. ಇದನ್ನು ಬರೆದಿರುವ ಈಶ್ವರ ಕವಿಯು ತುಮಕೂರು ಜಿಲ್ಲೆಯ
ನಿಡುವಾಣಿ ಎಂಬ ಊರಿನವನು. ಅಭಿನವ ಕೇಶಿರಾಜ ಎನ್ನುವುದು ಅವನ ಬಿರುದು. ಇದು, ಕವಿಗಳ ನಾಲಿಗೆಗೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದಲೇ ರಚಿತವಾಗಿರುವ
ಗ್ರಂಥ. ಆದ್ದರಿಂದ ಈ ಕೃತಿಯು ಕಾವ್ಯರಚನೆಯ ಬಗ್ಗೆ ಬಹಳ ಕಟುವಾದ ನಿಯಮಗಳನ್ನು ಹೇಳಿ, ಅವುಗಳನ್ನು
ಪಾಲಿಸಲೇ ಬೇಕೆಂದು ವಿಧಿಸುತ್ತದೆ. ಈ ನಿಯಮಗಳನ್ನು ಪಾಲಿಸದವರಿಗೆ ಆಗುವ ಶಿಕ್ಷೆಗಳನ್ನೂ ವಿವರಿಸುತ್ತದೆ.
ಈ ಕೃತಿಯಲ್ಲಿ ನಾಲ್ಕು ಭಾಗಗಳಿದ್ದು ಒಟ್ಟು 246 ಪದ್ಯಗಳಿವೆ. ಈ ಪದ್ಯಗಳನ್ನು ವೃತ್ತಗಳಲ್ಲಿ ಹಾಗೂ
ಕಂದಪದ್ಯಗಳಲ್ಲಿ ರಚಿಸಲಾಗಿದೆ. ಈಶ್ವರ ಕವಿಯು, ನಮಗೆ ಪರಿಚಿತವಾದ ಅಕ್ಷರ ಛಂದಸ್ಸಿನ ಮ, ಯ, ರ, ಸ,
ತ, ಜ, ಭ, ನ ಗಣಗಳನ್ನು ತೆಗೆದುಕೊಂಡು ಅವುಗಳಿಗೆ ಅನುಕ್ರಮವಾಗಿ ಬೇರೆ ಬೇರೆಯ ವಾಹನಗಳು, ನಕ್ಷತ್ರಗಳು,
ಗ್ರಹಗಳು, ದಿಕ್ಕುಗಳು, ಕಾವ್ಯರಸಗಳು, ಜಾತಿಗಳು ಮತ್ತು ಲಿಂಗಗಳನ್ನು ಆರೋಪಿಸುತ್ತಾನೆ. ಇವೆಲ್ಲವೂ
ವಾಸ್ತವಕ್ಕಿಂತ ಹೆಚ್ಚಾಗಿ ಕಲ್ಪನೆಯ ಸೀಮೆಗೆ ಸೇರುತ್ತವೆ. ಇಂಥ ವಿಷಯಗಳು ಮೊದಲ ಅಧ್ಯಾಯದಲ್ಲಿ ಬಂದಿವೆ.
ಎರಡನೆಯ ಅಧ್ಯಾಯದಲ್ಲಿ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗುವ ವಿಭಿನ್ನ ಪ್ರಾಸಗಳನ್ನು ಪರಿಚಯ ಮಾಡಿಕೊಡುತ್ತದೆ.
ತೆಲುಗಿಗೆ ವಿಶಿಷ್ಟವಾದ ‘ವಡಿ’ ಎಂಬ ಪರಿಕಲ್ಪನೆಯನ್ನು
ವಿವರಿಸಿರುವುದು ಇಲ್ಲಿನ ವಿಶೇಷ. ಮೂರನೆಯ ಅಧ್ಯಾಯವು ಕನ್ನಡ ವರ್ಣಮಾಲೆಯ ಎಲ್ಲ ಅಕ್ಷರಗಳನ್ನೂ ತೆಗೆದುಕೊಂಡು
ಅವುಗಳಲ್ಲಿ ಪ್ರತಿಯೊಂದಕ್ಕೂ ಶುಭ ಮತ್ತು ಅಶುಭ ಲಕ್ಷಣಗಳನ್ನು ಹೇಳುತ್ತದೆ. ಈ ಅಕ್ಷರಗಳ ವಿವಿಧ ಸಂಯೋಜನೆಗಳನ್ನು
ಒಪ್ಪಲಾಗಿದೆ ಅಥವಾ ನಿಷ್ಠುರವಾಗಿ ನಿಷೇಧಿಸಲಾಗಿದೆ. ನಾಲ್ಕನೆಯ ಮತ್ತು ಕೊನೆಯ ಅಧ್ಯಾಯವು ಕನ್ನಡದ
ಉಪಭಾಷಾಪ್ರಭೇದಗಳೆಂದು ಒಳುಗನ್ನಡ, ಬೆಳುಗನ್ನಡ, ಪಳಗನ್ನಡ, ಸಕ್ಕಜಗನ್ನಡ ಮುಂತಾದವನ್ನು ಹೆಸರಿಸುತ್ತದೆ.
ಆದರೆ, ಆ ಕಾಲದ ಕನ್ನಡದ ಸ್ವರೂಪವನ್ನು ಕುರಿತು, ಮಹತ್ವದ ತೀರ್ಮಾನಗಳನ್ನು ತಲುಪಲು ಸಾಧ್ಯವಾಗದಷ್ಟು
ಈ ಅಧ್ಯಾಯವು ಕಿರಿದಾಗಿದೆ ಮತ್ತು ಮಾಹಿತಿಗಳು ಸಂಕ್ಷಿಪ್ತವಾಗಿದೆ. ಅದುವರೆಗೆ ಯಾರೂ ಗಮನಿಸದೆ ಇದ್ದ
ಮಾತ್ರಾಗಣ ಷಟ್ಪದಿಗಳ ಬಗ್ಗೆ ಮಾತನಾಡಿರುವುದು ವಿಶೇಷ. ಕೊನೆಯಲ್ಲಿ ಈ ಪುಸ್ತಕವು ಕಾಮಶಾಸ್ತ್ರಕ್ಕೆ
ಸಂಬಂಧಿಸಿದ ಕೆಲವು ಅಪ್ರಸ್ತುತ ವಿವರಗಳನ್ನು ಕೊಡುತ್ತದೆ. ಇಲ್ಲಿಯೂ, ಪತಿಯು ಪತ್ನಿಗೆ ವಿವರಿಸಿ ಹೇಳುವಂತೆ,
ಪದ್ಯಗಳನ್ನು ರಚಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಇದು ಮಹತ್ವದ ವಿಷಯವನ್ನು ಕುರಿತ ಸಾಮಾನ್ಯವಾದ
ಪುಸ್ತಕ. ಅನೇಕ ಕವಿಗಳು, ಛಂದಶ್ಶಾಸ್ತ್ರಜ್ಞರು ಹಾಕಿರುವ ನಿಯಮಗಳನ್ನು ತಿಳಿದೇ ಇಲ್ಲವೆನ್ನುವುದರಲ್ಲಿ
ಅಚ್ಚರಿಯೇನೂ ಇಲ್ಲ. ಆದರೆ, ಇಲ್ಲಿನ ನಿಯಮಗಳು ಬಹುಮಟ್ಟಿಗೆ ಸರಿಯಾಗಿಯೇ ಇವೆ.
- ಪ್ರಕಟಣೆಯ ಇತಿಹಾಸ:
ಅ. 1939, ಸಂ. ಎಚ್. ಶೇಷಯ್ಯಂಗಾರ್,
‘ಆನಲ್ಸ್ ಆಫ್ ಓರಿಯೆಂಟಲ್ ರಿಸರ್ಚ್’ನಲ್ಲಿ ಪ್ರಕಟಿತ
ಆ. 1950, ಸಂ. ಆರ್.ಎಸ್. ಪಂಚಮುಖಿ, ಕನ್ನಡ ಸಂಶೋಧನ ಸಂಸ್ಥೆ,
ಧಾರವಾಡ.
ಇ. 1952, ಸಂ. ಎ.ಆರ್. ಕೃಷ್ಣಶಾಸ್ತ್ರೀ, ಕನ್ನಡ ಸಾಹಿತ್ಯ ಪರಿಷತ್ತು,
ಬೆಂಗಳೂರು
ಈ. 1974, ಸಂ. ಎಲ್. ಬಸವರಾಜು, (‘ಕನ್ನಡ ಛಂದಸ್ಸಂಪುಟ’ದಲ್ಲಿ) ಗೀತಾ ಬುಕ್ ಹೌಸ್, ಮೈಸೂರು.
- ಮುಂದಿನ ಓದು ಮತ್ತು ಲಿಂಕುಗಳು:
- ಅನುವಾದ:
|